Wednesday, July 17, 2013

Prajavani: Tribute to Prof Amar Bose

Prajavani
ಉತ್ಕೃಷ್ಟತೆಗೆ ತುಡಿದ ಬದುಕು
·          
·         Wed, 07/17/2013




ವಿಶ್ವ ವಿಖ್ಯಾತವಾದ ಆಡಿಯೋ ಬ್ರಾಂಡ್ `ಬೋಸ್' ಜನಕ ಅಮರ್ ಬೋಸ್ ಇದೇ ಜುಲೈ 12ರಂದು ನಿಧನರಾದರು. ಅಮೆರಿಕದ ಮೆಸಾಚುಸೆಟ್ಸ್ ಬೋಸ್ಟನ್ ಸಮೀಪದಲ್ಲಿರುವ ಅವರ ಮನೆಯಲ್ಲೇ ದೇಹಾಂತ್ಯ ಸಂಭವಿಸಿತು. ಅಮರ್ ಬೋಸ್ ತಾಯಿ ಅಮೆರಿಕನ್. ತಂದೆ  ನೋನಿ ಗೋಪಾಲ್ ಬೋಸ್ ಭಾರತೀಯ. ಕ್ರಾಂತಿಕಾರಿಯಾಗಿದ್ದ ನೋನಿ ಗೋಪಾಲ್ ಬೋಸ್ 1920ರಲ್ಲಿ ತಮ್ಮನ್ನು ಬೆನ್ನು ಹತ್ತಿದ್ದ ಬ್ರಿಟಿಷ್ ಸಿಐಡಿಗಳಿಂದ ತಪ್ಪಿಸಿಕೊಳ್ಳಲು ಹಡಗು ಹತ್ತಿ ಅಮೆರಿಕ ತಲುಪಿದವರು.
ಅಮರ್ಬೋಸ್ 1929ರಲ್ಲಿ ಫಿಲಡೆಲ್ಫಿಯಾದಲ್ಲಿ ಹುಟ್ಟಿದರು. ಆಗ ಅವರ ತಾಯಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದರು. ರೇಡಿಯೋ ರಿಪೇರಿ ಅಂಗಡಿಯೊಂದನ್ನು ನಡೆಸುತ್ತಿದ್ದ ತಂದೆ ನೋನಿ ಗೋಪಾಲ್ ಇದರ ಜೊತೆಯಲ್ಲೇ  ತಾರಕನಾಥ್ ದಾಸ್ ಅವರೊಂದಿಗೆ ಸೇರಿಕೊಂಡು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ಕ್ರಾಂತಿಕಾರಿಗಳಿಗೆ ಸಹಾಯ ಮಾಡುವ ಜಾಲವೊಂದರಲ್ಲಿ ಸಕ್ರಿಯರಾಗಿದ್ದರು.
ನಾನು ಅಮರ್ ಬೋಸ್ರನ್ನು ಭೇಟಿಯಾದಾಗ ಅವರು ಕಾಲದಲ್ಲಿ ತಮ್ಮ ಮನೆಯಲ್ಲಿ ನಡೆಯುತ್ತಿದ್ದ ರಹಸ್ಯ ಸಭೆಗಳನ್ನು ನೆನಪಿಸಿಕೊಂಡು ಜಲಿಯನ್ ವಾಲಾಬಾಗ್ ನರಮೇಧದಲ್ಲಿ ಅದೃಷ್ಟವಶಾತ್ ಪ್ರಾಣ ಉಳಿಸಿಕೊಂಡ ಒಬ್ಬರು ತಮ್ಮ ಮನೆಗೆ ಭೇಟಿ ಕೊಟ್ಟದ್ದನ್ನು ಹೇಳಿದರು. ವ್ಯಕ್ತಿ ಮತ್ತು ಮನೆಗೆ ಬರುತ್ತಿದ್ದ ಕ್ರಾಂತಿಕಾರಿಗಳು ಹೇಳುತ್ತಿದ್ದ ಕತೆಗಳ ಮೂಲಕ ಅಮರ್ಗೆ ಭಾರತದಲ್ಲಿ ನಡೆಯುತ್ತಿದ್ದ ಬ್ರಿಟಿಷರ ದೌರ್ಜನ್ಯಗಳು ತಿಳಿಯುತ್ತಿದ್ದವು. ವಿವರಗಳು ಅರವತ್ತು ವರ್ಷಗಳ ನಂತರವೂ ಅವರ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಉಳಿದಿದ್ದವು.
ಫಿಲಡೆಲ್ಫಿಯಾದಲ್ಲಿ ಕಳೆದ ಅಮರ್ ಬೋಸ್ ಬಾಲ್ಯವೇನೂ ಸುಲಭದ್ದಾಗಿರಲಿಲ್ಲ. ಸಾಮಾನ್ಯವಾಗಿ ಅಮೆರಿಕದ ದಕ್ಷಿಣದ ತುದಿಯನ್ನು ಧರ್ಮಾಂಧತೆ ಮತ್ತು ಜನಾಂಗೀಯ ಭೇದದ ಕೇಂದ್ರವನ್ನಾಗಿ ಪರಿಭಾವಿಸಲಾಗುತ್ತದೆ. ಆದರೆ 30 ಮತ್ತು 40 ದಶಕಗಳಲ್ಲಿ `ಹಕ್ಕುಗಳ ಮಸೂದೆ' ಹುಟ್ಟಿಗೆ ಕಾರಣವಾಗಿ ಫಿಲಡೆಲ್ಫಿಯಾದಲ್ಲೂ ಬೋಸ್ ಕುಟುಂಬ ಚರ್ಮದ ಬಣ್ಣದ ಕಾರಣಕ್ಕಾಗಿ ತೀವ್ರ ಸ್ವರೂಪದ ತಾರತಮ್ಯ ಮತ್ತು ಅವಮಾನಗಳನ್ನು ಎದುರಿಸಬೇಕಾಯಿತು. ಅವರೇ ಹೇಳಿದಂತೆ `ನನ್ನ ತಾಯಿ ಕಟ್ಟಾ ಸಸ್ಯಾಹಾರಿ ಮತ್ತು ವೇದಾಂತಿ. ಹಾಗಾಗಿ ಚಿಂತನೆಯಲ್ಲಿ ಆಕೆಯೇ ನನ್ನ ತಂದೆಗಿಂತ ಹೆಚ್ಚು ಭಾರತೀಯಳಾಗಿದ್ದಳು. ನಮಗೆ ಕಾಲದಲ್ಲಿ ಯಾರೂ ಬಾಡಿಗೆಗೆ ಮನೆ ಕೊಡುತ್ತಿರಲಿಲ್ಲ. ಮನೆ ಹುಡುಕುವುದಕ್ಕೆ ಅಮ್ಮನನ್ನೇ ಕಳುಹಿಸುತ್ತಿದ್ದೆವು, ಏಕೆಂದರೆ ಆಕೆ ಬಿಳಿಯಳಾದ ಅಮೆರಿಕನ್'.
`ಯಾವ ಉಪಾಹಾರ ಗೃಹಕ್ಕೆ ಹೋದರೂ ನಾವಲ್ಲಿ ಸುಮ್ಮನೆ ಕುಳಿತಿರಬೇಕಿತ್ತಷ್ಟೇ, ಯಾವ ಸರ್ವರ್ ಕೂಡಾ ನಮ್ಮ ಬಳಿ ಬರುತ್ತಿರಲಿಲ್ಲ. ಕೊನೆಗೆ ಅಪ್ಪ ಮ್ಯಾನೇಜರ್ನನ್ನು ಕರೆಯುತ್ತಿದ್ದರು, ಇಡೀ ರೆಸ್ಟೋರೆಂಟ್ ದಿಡೀರನೆ ಮೌನಕ್ಕೆ ಶರಣಾಗುತ್ತಿತ್ತು. ಅಪ್ಪ ಸಣ್ಣದೊಂದು ಭಾಷಣ ಮಾಡುತ್ತಿದ್ದರು ನಾವು ನಿಮಗೆ ಅಡುಗೆ ಮಾಡಿ ಬಡಿಸಿದರೆ ನಿಮಗೆ ಆಕ್ಷೇಪವಿಲ್ಲ, ನಾವು ದೇಶಕ್ಕಾಗಿ ಹೋರಾಡಿ ಸತ್ತರೆ ನೀವು ಬೇಡವೆನ್ನುವುದಿಲ್ಲ. ಆದರೆ ನಾವು ದುಡ್ಡು ಕೊಟ್ಟು ಸೇವೆ ಪಡೆಯಲು ಮಾತ್ರ ಅರ್ಹರಲ್ಲ. ಇದೇಕೆ ಹೀಗೆ?. ಇಂಥದ್ದೊಂದು ವಿಶಾಲಾತ್ಮಕ ಆಯಾಮವುಳ್ಳ ಪ್ರಶ್ನೆ ಉಪಾಹಾರ ಗೃಹದ ಮಾಲಿಕನ ಮೇಲೆ ಯಾವ ಪರಿಣಾಮವನ್ನೂ ಬೀರುತ್ತಿರಲಿಲ್ಲ. ನಾವೆಲ್ಲಾ ಎದ್ದು ಅಲ್ಲಿಂದ ಹೊರಟುಬಿಡುತ್ತಿದ್ದೆವು. ಇಷ್ಟಾದರೂ ಅಪ್ಪ ಯಾವತ್ತೂ ತಾನು `ಆಫ್ರಿಕನ್-ಅಮೆರಿಕನ್' ಅಲ್ಲ ತಾನು `ಭಾರತೀಯ' ಎಂದು ಹೇಳುತ್ತಿರಲಿಲ್ಲ. ಅದೇನೇ ಇದ್ದರೂ ಅವರ ಅಭಿಪ್ರಾಯದಂತೆ ಪ್ರತಿಭೆಯನ್ನು ಗುರುತಿಸುವುದರ ಮಟ್ಟಿಗೆ ಅಮೆರಿಕದಂಥ ದೇಶ ಮತ್ತೊಂದಿಲ್ಲ'
ಅಮರ್ ಬೋಸ್ಗೆ ಎಲೆಕ್ಟ್ರಾನಿಕ್ಸ್ನಲ್ಲಿ ಆಸಕ್ತಿ ಮೂಡಿದ್ದು ಅವರ ಹದಿಹರೆಯದಲ್ಲಿ. ಅದಕ್ಕೊಂದು ಬಗೆಯಲ್ಲಿ ಅಪ್ಪನ ರೇಡಿಯೋ ಅಂಗಡಿಯೇ ಕಾರಣವಾಯಿತು. ಚಿಕ್ಕಂದಿನಲ್ಲಿಯೇ ಕಲಿಕೆಯಲ್ಲಿ ಅಸಾಧಾರಣ ಪ್ರತಿಭೆಯಿದ್ದುದರಿಂದ ಅವರಿಗೆ ಆಗಲೇ ದಂತಕತೆಯಾಗಿದ್ದ `ಎಂಐಟಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ' ಪ್ರವೇಶ ದೊರೆಯಿತು. ಅಲ್ಲಿಂದ ಅವರು ಬೌದ್ಧಿಕತೆಯ ಶಿಖರಗಳನ್ನು ಏರುತ್ತಲೇ ಹೋದರು. 20ನೇ ಶತಮಾನದ ಬಹುದೊಡ್ಡ ಗಣಿತಜ್ಞ ನಾರ್ಬರ್ಟ್ ವೀನರ್ ಅವರ ಮಾರ್ಗದರ್ಶನದಲ್ಲಿ ತಮ್ಮ ಪಿಎಚ್ಡಿ ಪೂರೈಸಿದರು.
1956ರಲ್ಲಿಯೇ ಅಮರ್ ಬೋಸ್ಗೆ `ಎಂಐಟಿ'ಯಲ್ಲೇ ಅಧ್ಯಾಪನ ವೃತ್ತಿಯ ಅವಕಾಶ ದೊರೆತಿತ್ತು. ಆದರೆ ಭಾರತದಲ್ಲಿ ಹಲವು ಗೆಳೆಯರನ್ನು ಹೊಂದಿದ್ದ ನಾರ್ಬರ್ಟ್ ವೀನರ್ ಫುಲ್ಬ್ರೈಟ್ ಫೆಲೋಶಿಪ್ ಪಡೆದುಕೊಂಡು ಭಾರತಕ್ಕೆ ಹೋಗಲು ಸೂಚಿಸಿದರು. ಅದರಂತೆ ಭಾರತಕ್ಕೆ ಬಂದ ಅಮರ್ ಬೋಸ್, ಪಿ.ಸಿ.ಮಹಲನೊಬಿಸ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಕೊಲ್ಕೊತ್ತಾದ `ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್' ಮತ್ತು   ಪ್ರೊ. ಕೆ.ಎಸ್. ಕೃಷ್ಣನ್ ಅವರ ನೇತೃತ್ವದ ದೆಹಲಿಯ `ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿ'ಯಲ್ಲಿ ಒಂದು ವರ್ಷ ಅಧ್ಯಯನ ನಿರತರಾಗಿದ್ದರು.
ಭಾರತದಿಂದ ಹಿಂದಿರುಗಿದ ನಂತರ ಎಂಐಟಿಯಲ್ಲಿ ಅಧ್ಯಾಪನ ಆರಂಭಿಸಿದ ಅಮರ್ ಬೋಸ್ ನಾಲ್ಕು ದಶಕಗಳ ಕಾಲ ಅತ್ಯಂತ ಜನಪ್ರಿಯ ಅಧ್ಯಾಪಕರಾಗಿದ್ದರು. ಅವರ ಬೋಧನಾ ಕೌಶಲ ಮತ್ತು ಉತ್ಸಾಹವನ್ನು ಅವರ ಅನೇಕ ವಿದ್ಯಾರ್ಥಿಗಳು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರು ಅತ್ಯಂತ ಕಠಿಣ ಸಮಸ್ಯೆಗಳನ್ನು ಮುಂದೊಡ್ಡಿ ವಿದ್ಯಾರ್ಥಿಗಳನ್ನು ಪರೀಕ್ಷಿಸುತ್ತಿದ್ದರು. ತಮ್ಮ ಗುಣದ ಬಗ್ಗೆ ಅಮರ್ ಬೋಸ್ ಹೇಳುವುದು ಹೀಗೆ. `ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸುವಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಯಾರು ಯಾವುದರಲ್ಲಿ ಸಮರ್ಥರು ಎಂಬುದು ತಿಳಿಯುತ್ತದೆ. ಫಲಿತಾಂಶ ನಿಮ್ಮನ್ನೇ ಆಶ್ಚರ್ಯಚಕಿತರನ್ನಾಗಿ ಮಾಡಬಹುದು'
`ಎಂಐಟಿ'ಯಲ್ಲಿರುವಾಗ ಅವರು ಧ್ವನಿ ವಿಜ್ಞಾನ ಮತ್ತು ಆಡಿಯೋ ಸಿಸಂರ್ಟಗಳ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳಿಗೆ ಕಾರಣರಾದರು. ಪ್ರಕ್ರಿಯೆಯಲ್ಲೇ ಪ್ರಖ್ಯಾತ `ಬೋಸ್ ಸ್ಪೀಕರ್'ಗಳ ಸೃಷ್ಟಿಯಾದವು.
ಅಮರ್ ಬೋಸ್ ಅಧ್ಯಾಪನ ವೃತ್ತಿಯಲ್ಲಿ ಮುಂದುವರಿಯುತ್ತಲೇ ಸ್ವಂತ ಕಂಪೆನಿ `ಬೋಸ್ ಕಾರ್ಪ್' ಸ್ಥಾಪಿಸುವುದಕ್ಕೂ `ಎಂಐಟಿ' ಅನುಮತಿ ನೀಡಿತು. ಕಂಪೆನಿಯ ಧ್ಯೇಯ ವಾಕ್ಯ `ಸಂಶೋಧನೆಯ ಮೂಲಕ ಉತ್ತಮ ಧ್ವನಿ'. ಧ್ಯೇಯಕ್ಕೆ ಬದ್ಧರಾಗಿ ಉಳಿದ ಅಮರ್ ಬೋಸ್, ಸೋನಿ, ಫಿಲಿಪ್ಸ್ನಂಥ ಬೃಹತ್ ಕಂಪೆನಿಗಳಿಗೆ ಸೆಡ್ಡು ಹೊಡೆದು ಜಗತ್ತಿನ ಅತಿ ದೊಡ್ಡ ಆಡಿಯೋ ಬ್ರಾಂಡ್ ಒಂದನ್ನು ರೂಪಿಸಿದರು.
ಅವರ ಯಶಸ್ಸಿನ ಹಿಂದಿದ್ದ ರಹಸ್ಯ ಮಾರ್ಗಪ್ರವರ್ತಕ ಸಂಶೋಧನೆಗಳು ಮತ್ತು ಅದನ್ನು ಆಧಾರವಾಗಿಟ್ಟುಕೊಂಡ ಅಭಿವೃದ್ಧಿ. ಆಡಿಯೋಗೆ ಸಂಬಂಧಿಸಿದ ಅವರ ಸಂಶೋಧನೆಗಳಷ್ಟು ಅವರ ಇತರ ಕೆಲಸಗಳು ಹೊರ ಜಗತ್ತಿಗೆ ತಿಳಿದಿಲ್ಲ. ಆಟೋಮೊಬೈಲ್ ಮತ್ತು ಸಿಗ್ನಲ್ ಪ್ರೊಸೆಸಿಂಗ್ ಕ್ಷೇತ್ರಕ್ಕೂ ಅಮರ್ ಬೋಸ್ ಅವರ ಸಂಶೋಧನಾ ಕಾಣ್ಕೆಗಳು ದೊಡ್ಡವು.
ನಿಮ್ಮ ಕಂಪೆನಿಯೇಕೆ ಸಾರ್ವಜನಿಕರಿಗೆ ಷೇರುಗಳನ್ನು ಮಾರಿ ಹೆಚ್ಚಿನ ಬಂಡವಾಳ ಸಂಗ್ರಹಿಸುವ ಪ್ರಯತ್ನ ಮಾಡಲಿಲ್ಲ? ಎಂಬ ನನ್ನ ಪ್ರಶ್ನೆಗೆ ಅವರು ನೀಡಿದ ಉತ್ತರ ಕುತೂಹಲಕಾರಿಯಾಗಿದೆ `ನಮ್ಮ ಉದ್ಯೋಗಿಗಳಿಗೆ ನಾವು ಅತ್ಯುತ್ತಮವಾದ ಸಂಬಳ ನೀಡುತ್ತಿದ್ದೇವೆ. ನನಗೆ ಹಣ ಬೇಕಾಗಿಲ್ಲ. ಕಂಪೆನಿಗೆ ಬರುವ ಒಂದೊಂದು ಡಾಲರ್ ಲಾಭವನ್ನು ಮತ್ತೆ ಅಲ್ಲೇ ತೊಡಗಿಸುತ್ತೇವೆ. ಕಂಪೆನಿಯನ್ನು ಷೇರು ಮಾರಾಟದ ಮೂಲಕ ಸಾರ್ವಜನಿಕಗೊಳಿಸುವುದರಿಂದ ನಾವು ಸಂಶೋಧನೆಗೆ ಹೇಗೆ ವೆಚ್ಚ ಮಾಡಬೇಕು ಎಂಬುದನ್ನು ಇತರರು (ನಿರ್ದೇಶಕರ ಮಂಡಳಿ) ಹೇಳುವಂತಾಗುತ್ತದೆ. ನಾವು ಕೈಗೆತ್ತಿಕೊಂಡಿರುವ ಕೆಲವು ಯೋಜನೆಗಳು ಮುಗಿಸುವುದಕ್ಕೆ ದಶಕಗಳಷ್ಟು ಸಮಯ ಬೇಕು. ಕೆಲವು ದಶಕಗಳುರುಳಿದ ನಂತರವೂ ಮುಗಿಯದೇ ಉಳಿಯಬಹುದು. ನಮ್ಮ ಹಣವನ್ನು ಖರ್ಚು ಮಾಡುವ ಸ್ವಾತಂತ್ರ್ಯ ನಮಗಿಲ್ಲದೇ ಹೋಗಿದ್ದರೆ ಇಂಥ ಯೋಜನೆಗಳನ್ನು ನಾವು ಕೈಗೆತ್ತಿಕೊಳ್ಳಲು ಸಾಧ್ಯವಿರಲಿಲ್ಲ'.
`ಎಂಐಟಿ' ಬಗ್ಗೆ ಅವರಿಗಿದ್ದ ಅಭಿಮಾನವೂ ಒಂದು ದಂತ ಕಥೆಯೇ. ಬೌದ್ಧಿಕ ಆಸ್ತಿ ಹಕ್ಕಿಗೆ ಸಂಬಂಧಿಸಿದ `ಎಂಐಟಿ' ನೀತಿ ಕುರಿತು ಅವರು ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಆದರೆ, ವಿಚಾರವೇನೂ ಅವರು ಬೋಸ್ಕಾರ್ಪ್ನಲ್ಲಿನ ತಮ್ಮ ಎಲ್ಲಾ ಷೇರುಗಳನ್ನು `ಎಂಐಟಿ'ಗೆ ಸಂಪನ್ಮೂಲ ಒದಗಿಸುವ ಒಂದು ಟ್ರಸ್ಟ್ಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಅಡ್ಡಿಯಾಗಲಿಲ್ಲ.
ಜ್ಞಾನದ ಸೃಷ್ಟಿ ಯಾವತ್ತೂ ಅಮರ್ ಬೋಸ್ರನ್ನು ಪ್ರಚೋದಿಸುತ್ತಿದ್ದ ಸಂಗತಿ. ದ್ವನಿ ತರಂಗಗಳು, ಗೋಲಾಕೃತಿಯಲ್ಲಿ ಅಳವಡಿಸಲಾಗುವ ಸ್ಪೀಕರುಗಳು ಇತ್ಯಾದಿಗಳನ್ನು ವಿವರಿಸುವ ಸಂದರ್ಭ ಬಂದಾಗಲೆಲ್ಲಾ ಅವರ ಕಣ್ಣುಗಳಲ್ಲಿ ಹೊಳಹು ಮತ್ತು ಉತ್ಸಾಹವನ್ನು ಗುರುತಿಸಬಹುದಿತ್ತು. ಬೌದ್ಧಿಕ ಸವಾಲುಗಳನ್ನು, ವಾಣಿಜ್ಯಾತ್ಮಕ ಸವಾಲುಗಳನ್ನು ಒಂದೇ ಬಗೆಯಲ್ಲಿ ಎದುರಿಸಿ ಎದುರಾಳಿಗಳನ್ನು ಮಣಿಸಿದ್ದಷ್ಟೇ ಅಲ್ಲದೇ ಹೊಸ ತಂತ್ರಜ್ಞಾನವನ್ನು ಸೃಷ್ಟಿಸಿದ ಅಪರೂಪದ ವಿದ್ವಾಂಸ ಅಮರ್ ಬೋಸ್. ಜಪಾನಿ ಕಂಪೆನಿಗಳನ್ನು ಸೋಲಿಸಿದ್ದು ಇದಕ್ಕೊಂದು ಅತ್ಯಂತ ಉತ್ತಮ ಉದಾಹರಣೆ. ಸಾಮಾನ್ಯವಾಗಿ ಅಮೆರಿಕದ ಕಂಪೆನಿಗಳು `ಜಪಾನಿ ಕೋಟೆ' ಎದುರು ಕೈಚೆಲ್ಲಿಬಿಡುತ್ತವೆ.
ಅಮರ್ ಬೋಸ್ ತಮ್ಮ ಮಗ ವನು ಮತ್ತು ಮಗಳು ಮಾಯಾರನ್ನು ಅಗಲಿದ್ದಾರೆ. ಡಾ. ವನು ಬೋಸ್ ಸ್ವತಃ ಎಂಐಟಿಯ ಹಳೆಯ ವಿದ್ಯಾರ್ಥಿ, ಅವರು ತಮ್ಮದೇ ಒಂದು ಕಂಪೆನಿಯನ್ನು ಸ್ಥಾಪಿಸಿದ್ದಾರೆ. ಅದು ನಿಸ್ತಂತು ಮತ್ತು ಸೆಲ್ಯುಲಾರ್ ಸಂವಹನ ಕ್ಷೇತ್ರಕ್ಕೆ ಅಗತ್ಯವಿರುವ ಪರಿಹಾರಗಳನ್ನು ಒದಗಿಸುತ್ತದೆ. ಇದರ ಘಟಕಗಳು ಬೋಸ್ಟನ್, ಬೆಂಗಳೂರು ಮತ್ತು ದೆಹಲಿಗಳಲ್ಲಿವೆ. ಒಂದು ಕ್ಲೀಷೆಯನ್ನು ಬಳಸುವುದಾದರೆ, ಅಮರ್ ಬೋಸ್ಗೆ ವಯಸ್ಸಾಗಲೇ ಇಲ್ಲ. ಅವರಿಂದ ಸದಾ ಧನಾತ್ಮಕ ಶಕ್ತಿ ಒಸರುತ್ತಲೇ ಇತ್ತು. ಅಮರ್ ಬೋಸ್ರನ್ನು ಯಾರಾದರೂ ಸಾಧಕನೆಂದರೆ ಅವರು ತಕ್ಷಣ ಮುದುಡಿಕೊಂಡು ಬಿಡುತ್ತಿದ್ದರು. ಆದರೆ ಭೌತಶಾಸ್ತ್ರದ ಕುರಿತು ಚರ್ಚಿಸೋಣವೆಂದರೆ ಪುಟಿದೆದ್ದು ಚಾಕ್ ಪೀಸ್ನೊಂದಿಗೆ ಕಪ್ಪು ಹಲಗೆಯ ಎದುರು ನಿಂತುಬಿಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ದೊರೆಯಲಿ.
ಫಿಲಡೆಲ್ಫಿಯಾದಲ್ಲಿ ಜನನ                                                               1929
ಎಂಐಟಿಯಲ್ಲಿ ಎಂಜಿನಿಯರಿಂಗ್ ವ್ಯಾಸಂಗ                                        1947-56, (BS, MS, PhD)
ನ್ಯಾಷನಲ್ ಫಿಸಿಕಲ್ ಲ್ಯಾಬೊರೇಟರಿಯಲ್ಲಿ ಒಂದು ವರ್ಷ ಅಧ್ಯಯನ       1956-57
ಎಂಐಟಿಯಲ್ಲಿ ನಾಲ್ಕು ದಶಕ ಜನಪ್ರಿಯ ಅಧ್ಯಾಪಕ
‘ಬೋಸ್ ಕಾರ್ಪ್ಸ್ಥಾಪನೆ                                                              1964

(ಲೇಖಕರು ಭೌತಶಾಸ್ತ್ರಜ್ಞ ಮತ್ತು ಪತ್ರಕರ್ತ. ಈಗ ಟಾಟಾ ಬಳಗದಲ್ಲಿ ಸೀನಿಯರ್ ಎಕ್ಸಿಕ್ಯೂಟಿವ್ ಆಗಿದ್ದಾರೆ. `ಸ್ಯಾಂಡ್ ಟು ಸಿಲಿಕಾನ್: ಅಮೇಜಿಂಗ್ ಸ್ಟೋರಿ ಆಫ್ ಡಿಜಿಟಲ್ ಟೆಕ್ನಾಲಜಿ' ಇವರ ಪ್ರಮುಖ ಕೃತಿ.)
ಚಿತ್ರಗಳು: ಪಲಶ್ರಂಜನ್ ಭೌಮಿಕ್


No comments: